ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ರಂಗಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಮೂಲಕ ರಂಗಮುಖೇನ ಶಿಕ್ಷಣ ನೀಡುವ ಕ್ರಮವನ್ನು ಅನುಷ್ಟಾನಗೊಳಿಸಬೇಕು ಎನ್ನುವ ರಂಗಕರ್ಮಿಗಳ ಬೇಡಿಕೆ ಅನೇಕ ದಶಕಗಳದ್ದು. ಹೆಗ್ಗೋಡಿನ ಪ್ರಸನ್ನರವರ ನೇತೃತ್ವದಲ್ಲಿ ಈ ಬೇಡಿಕೆ ಈಡೇರಲು ಧರಣಿ ಹೋರಾಟಗಳೂ ನಡೆದಿವೆಯಾದರೂ ಇಲ್ಲಿವರೆಗೂ ಸರಕಾರ ರಂಗಕರ್ಮಿಗಳ ಬೇಡಿಕೆಗೆ ಮನ್ನಣೆ ಕೊಟ್ಟಿಲ್ಲ.
ಕಳೆದ ವರ್ಷ ಸಚಿವರಾಗಿದ್ದ ಆಂಜನೇಯರವರು ಕರ್ನಾಟಕದಲ್ಲಿರುವ 800 ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಸಂಗೀತ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಹೇಳಿದಾಗ ಕರ್ನಾಟಕ ನಾಟಕ ಅಕಾಡೆಮಿಯು ವಸತಿ ಶಾಲೆಗಳಿಗೆ ರಂಗಶಿಕ್ಷಕರನ್ನೂ ಸಹ ನೇಮಕ ಮಾಡಬೇಕು ಎಂದು ಸಚಿವರ ಮೇಲೆ ಸಾಧ್ಯವಾದ ಎಲ್ಲಾ ರೀತಿಯ ಒತ್ತಡ ತಂದಿತ್ತು. ನಾಟಕ ಅಕಾಡೆಮಿಯ ಪ್ರಥಮ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯವನ್ನು ಪಾಸ್ ಮಾಡಿ ರಂಗಶಿಕ್ಷಕರ ನೇಮಕಾತಿ ಮಾಡಲೇಬೇಕೆಂದು ಸಚಿವ ಆಂಜನೇಯಪ್ಪನವರಿಗೆ, ಸಚಿವೆ ಉಮಾಶ್ರೀಯವರಿಗೆ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಕಾರ್ಯದರ್ಶಿ ಹಾಗೂ ನಿರ್ದೇಶಕರಿಗೆ ಅಧೀಕೃತವಾಗಿ ನಾಟಕ ಅಕಾಡೆಮಿಯಿಂದ ಪತ್ರ ಬರೆದು ಮನವಿ ಮಾಡಲಾಗಿತ್ತು. 'ಚುನಾವಣೆಯ ನಂತರ ಮುಖ್ಯ ಮಂತ್ರಿಯವರ ಜೊತೆ ಮಾತಾಡಿ ರಂಗ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಪ್ರಯತ್ನಿಸುವೆ' ಎಂದು ಸಚಿವೆ ಉಮಾಶ್ರೀಯವರೂ ನಾಟಕ ಅಕಾಡೆಮಿಗೆ ಭರವಸೆ ಕೊಟ್ಟಿದ್ದರು. ನಾಟಕ ಅಕಾಡೆಮಿಯ ಅಧ್ಯಕ್ಷನಾಗಿ ನಾನು ಸಾಣೇಹಳ್ಳಿಯಲ್ಲಿ ನಡೆದ ಸಮಾರಂಭವೂ ಸೇರಿದಂತೆ ಭಾಗವಹಿಸಿದ ಬಹುತೇಕ ವೇದಿಕೆಗಳಲ್ಲಿ ರಂಗ ಶಿಕ್ಷಕರ ನೇಮಕಾತಿ ಕುರಿತು ಪ್ರಸ್ತಾಪಿಸಿ ಒತ್ತಾಯಿಸುತ್ತಲೇ ಬಂದೆ. ಜೊತೆಗೆ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮಿಗಳೂ ಸಹ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯರವರೊಂದಿಗೆ ಹಲವು ಸಭೆಗಳನ್ನು ನಡೆಸಿ ರಂಗಶಿಕ್ಷಕರ ನೇಮಕಾತಿಯಾಗುವಂತಹ ವಾತಾವರಣ ಸೃಷ್ಟಿಸಿದ್ದರು. ಗುತ್ತಿಗೆ ಆಧಾರದ ಮೇಲೆ ರಂಗಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸಚಿವರೂ ಒಪ್ಪಿದ್ದರು.
ಆದರೆ... ಅಷ್ಟರಲ್ಲಿ ಚುನಾವಣೆ ಬಂದು ಸರಕಾರದ ರೂಪರೇಷೆಯೇ ಬದಲಾಯ್ತು. ಮಂತ್ರಿಗಳೆಲ್ಲಾ ಬದಲಾದರು. ಹೊಸದಾಗಿ ಬಂದ ಶಿಕ್ಷಣ ಮಂತ್ರಿಗಳು ಸರಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ತೀವ್ರಗೊಳಿಸಿದರು. ಆಗ ಧಾರವಾಡ, ಚಿತ್ರದುರ್ಗ ಹಾಗೂ ಶಿವಮೊಗ್ಗದ ರಂಗಕರ್ಮಿಗಳು ಶಾಲೆಗಳಲ್ಲಿ ರಂಗಶಿಕ್ಷಕರ ನೇಮಕಾತಿಗಾಗಿ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಕೊಟ್ಟಿದ್ದಾರೆ, ಇನ್ನೂ ಕೆಲವು ಜಿಲ್ಲೆಗಳ ಕಲಾವಿದರುಗಳೂ ಸಹ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಎಲ್ಲಾ ರಂಗಕರ್ಮಿ ಕಲಾವಿದರ ಸಾತ್ವಿಕ ಹೋರಾಟವನ್ನು ಕರ್ನಾಟಕ ನಾಟಕ ಅಕಾಡೆಮಿಯು ಬೆಂಬಲಿಸುತ್ತದೆ. ಮತ್ತೆ ಮನವಿ ಪತ್ರಗಳನ್ನು ಸಂಬಂಧಿಸಿದ ಇಲಾಖೆಗಳಿಗೆ, ಸಚಿವರಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಬರೆದು, ಬೇರೆ ಬೇರೆ ಮೂಲಗಳಿಂದ ಸರಕಾರದ ಮೇಲೆ ಒತ್ತಡವನ್ನು ತಂದು ಸರಕಾರಿ ಶಾಲೆಗಳಿಗೆ ರಂಗಶಿಕ್ಷಕರು ನೇಮಕವಾಗುವ ನಿಟ್ಟಿನಲ್ಲಿ ಪ್ರಯತ್ನಿಸುತ್ತದೆ. ಈ ಮಹತ್ಕಾರ್ಯಕ್ಕೆ ಕರ್ನಾಟಕದ ರಂಗಕರ್ಮಿ ಕಲಾವಿದರ ಸಹಕಾರವನ್ನು ಅಕಾಡೆಮಿಯು ಕೋರುತ್ತದೆ.
ಜೆ.ಲೊಕೇಶ
ಅಧ್ಯಕ್ಷ
ಕರ್ನಾಟಕ ನಾಟಕ ಅಕಾಡೆಮಿ
No comments:
Post a Comment