Tuesday, April 9, 2024

ಶಿಕ್ಷಣದಲ್ಲಿ ರಂಗಭೂಮಿ, ಶಾಲಾ ರಂಗಭೂಮಿ

#ನನ್ನ_ಅನಿಸಿಕೆಗಳು

#        ಶಿಕ್ಷಣದಲ್ಲಿ ರಂಗಭೂಮಿ, ಶಾಲಾ ರಂಗಭೂಮಿ ಇವುಗಳು ಈಗ ಹೆಚ್ಚು ಚರ್ಚೆಗೆ ಒಳಪಡುತ್ತಿರುವುದು ಹಣದ ಚರ್ಚೆ ಬಂದಿರುವ ಕಾರಣಕ್ಕಾಗಿ ಹೊರತು ಇದು ಬಹಳಷ್ಟು ಜನರಿಗೆ ಆಸಕ್ತಿದಾಯಕವಾದ ವಿಷಯವೇನಲ್ಲ ಎಂಬುದು ಇಲ್ಲಿಯವರೆಗೆ ಆಗಿರುವ ಕೆಲಸಗಳನ್ನು ನೋಡಿದರೆ ಸರಳವಾಗಿ ತಿಳಿಯುತ್ತದೆ. ರಾಜ್ಯದ ಹಲವು ಶಾಲೆಗಳಲ್ಲಿ ಯಾವುದೇ ರಂಗ ತರಬೇತಿ ಪಡೆಯದ ಕೇವಲ ರಂಗಭೂಮಿಯ ಪ್ರೀತಿ,ಆಸಕ್ತಿಯಿಂದ ಹಲವಾರು ಪ್ರಾಥಮಿಕ,ಪ್ರೌಢಶಾಲಾ ಶಿಕ್ಷಕರು ತಮ್ಮ ತಮ್ಮ ಶಾಲೆಗಳಲ್ಲಿ ಗಂಭೀರವಾಗಿ ಹಲವು ಪ್ರಯೋಗಗಳನ್ನು( ನಾಟಕ ಪ್ರದರ್ಶನ ಮಾತ್ರ ಅಲ್ಲ) ಮಾಡಿರುವುದು ಇದೆ. ರಂಗ ತರಬೇತಿ ಪಡೆದ ಕೆಲವೇ ಕೆಲವು ಶಿಕ್ಷಕರು ನೇಮಕವಾದ ಮೇಲೆ ಅವರಲ್ಲಿ ಬಹಳಷ್ಟು ಜನ ಗುರುತಿಸುವಂತಹ ಕೆಲಸ ಮಾಡಿದ್ದಾರೆ, ಅದು ತಮ್ಮ ಜೇಬಿನಿಂದ ಹಣ ಖರ್ಚು ಮಾಡಿ. ವಿಷಯವಾರು ಪಾಠಗಳನ್ನು ಪಟ್ಟು ಹಿಡಿದು ಬೋಧಿಸುವ ಶಿಕ್ಷಕ /ಕಿಯರ ನಡುವೆ ನಾಟಕದ ಶಿಕ್ಷಕರು ಪಡುತ್ತಿರುವ ಪಾಡು ಬಹಳಷ್ಟು ಶಿಕ್ಷಣ ತಜ್ಞರಿಗೆ ಮತ್ತು ರಂಗ ತಜ್ಞರಿಗೆ ಖಂಡಿತವಾಗಿ ತಿಳಿದಿಲ್ಲ. ವಸತಿ ಶಾಲೆಗಳಲ್ಲಿ ದಿನದ 24 ಗಂಟೆ ಮಕ್ಕಳು ಅಲ್ಲೇ ಸಿಗುವುದರಿಂದ ಪ್ರಯೋಗಕ್ಕೆ ಒಡ್ಡಿಕೊಳ್ಳಲು ಅವು ಸೂಕ್ತವಾದ ಜಾಗಗಳು.

#        ಕರ್ನಾಟಕದಲ್ಲಿ ಮೊದಲ ಬಾರಿಗೆ ಜಿಲ್ಲೆಗೆ ಒಂದರಂತೆ ಮೊರಾರ್ಜಿ ವಸತಿ ಶಾಲೆಗಳು ಆರಂಭವಾದಾಗ ಶಿವಮೊಗ್ಗ ಜಿಲ್ಲೆ, ಗಾಜನೂರಿನ ವಸತಿ ಶಾಲೆಗೆ ನಾನು ನಿಯೋಜನೆ ಮೇರೆಗೆ ಹೋದೆ, ಚಿಕ್ಕ ವಯಸ್ಸಿಗೆ ಮನೆಯಿಂದ ಹೊರಗಿರುವ,ಕುಟುಂಬದ ಸದಸ್ಯರನ್ನು ಸದಾ ನೆನಪಿಸುವ ಓದಿನಲ್ಲಿ ಕೊಂಚ ಹಿಂದಿರುವ, ಕೂತು ಓದುವುದೇ ಸಮಸ್ಯೆ ಎಂದುಕೊಂಡಿರುವ,ಹೀಗೆ ಭಿನ್ನ-ಭಿನ್ನ ಸಮಸ್ಯೆ ಇರುವ ಮಕ್ಕಳನ್ನು ಸೃಜನಶೀಲವಾಗಿಸಲು,ಓದಿನ ಕಡೆಗೆ ತಿರುಗುವಂತೆ ಮಾಡಲು ನಾವು ಮೊರೆಹೋಗಿದ್ದು ರಂಗಭೂಮಿಗೆ. ಸಾಂಸ್ಕೃತಿಕ ಹಾಗು ಕ್ರೀಡಾ ಚಟುವಟಿಕೆಗಳು ಮಕ್ಕಳನ್ನು ಓದಿನ ಕಡೆಗೆ ಸೆಳೆಯ ಬಲ್ಲವೂ, ಹಾಗು ಭಿನ್ನವಾಗಿಯೋಚಿಸುವಂತೆ ಮಾಡಬಲ್ಲವು ಎಂಬುದನ್ನು ಪ್ರಯೋಗದ ಮೂಲಕವೇ ಕಂಡುಕೊಂಡೆವು ಯಶಸ್ಸಿಯು ಆದೇವು. 

#   ಶಿಕ್ಷಣದಲ್ಲಿ ರಂಗಭೂಮಿ ಎಂದರೆ ಶಾಲೆಯಲ್ಲಿ ನಾಟಕ ಮಾಡಿಸುವುದು ಇದಕ್ಕೂ ಮುಂದೆ ಹೋದರೆ ಪಠ್ಯ ವಸ್ತುವನ್ನು ರಂಗಕ್ಕೆ ಅಳವಡಿಸುವುದು ಎಂಬ ಸೀಮಿತ ಅರ್ಥದಲ್ಲಿಯೇ ಹಲವು ಚರ್ಚೆಗಳು ನಡೆದವು ನಡೆಯುತ್ತಿವೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಹಲವು ಕ್ರೀಯಾಶೀಲ ಅಧಿಕಾರಿಗಳು ಪಟ್ಟು ಹಿಡಿದು ಶಾಲೆಯಲ್ಲಿ ರಂಗಭೂಮಿಯನ್ನು ಅಳವಡಿಸಲು ಹೊರಟರು ಆಗ ಪ್ರಸಿದ್ಧ ರೆಪರ್ಟರಿಗಳು,ಹಲವು ಹಿರಿಯ ರಂಗತಜ್ಞರು ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದು ಇದೆ.
 " ಶಾಲೆಯೊಳಗೆ ರಂಗಭೂಮಿ ಹೋಗಬೇಕಾದರೆ ಶಾಲಾ ವ್ಯವಸ್ಥೆಗೆ ಪೂರಕವಾಗಿ ಹೋಗಬೇಕೆ ಹೊರತು, ರಂಗಭೂಮಿಗೆ ಅನುಕೂಲವಾಗುವಂತೆ ಶಾಲಾ ವ್ಯವಸ್ಥೆಗಳನ್ನು ಬದಲಾಯಿಸುವುದಲ್ಲ" ಎಂಬುದನ್ನು ತಜ್ಞರು ಗ್ರಹಿಸಲೇ ಇಲ್ಲ...ಈಗಲೂ ಹಾಗೆ ಇದೆ.

#  ಶಾಲೆಯಲ್ಲಿ ವಿಷಯ ಬೋಧಿಸುವ ಶಿಕ್ಷಕರುಗಳಿಗೆ ಒಂದಿಷ್ಟು ತರಬೇತಿ ನೀಡಿ ರಂಗಭೂಮಿಯ ತಂತ್ರಗಳಿಂದ "ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯನ್ನು ಸುಧಾರಿಸಬೇಕೆಂದು" ಇಲಾಖೆ ಬಹಳಷ್ಟು ಪ್ರಯತ್ನ ನಡೆಸಿ ತರಬೇತಿಗಳನ್ನು ನೀಡಿತು,ಕೆಲವು ಶಿಕ್ಷಕರು ಇದರಲ್ಲಿ ಯಶಸ್ವಿಯು ಆಗಿದ್ದಾರೆ, "ಶಿಕ್ಷಣದಲ್ಲಿ ರಂಗಭೂಮಿ" ಇದರ ಅಡಿಯಲ್ಲಿ ವಿಷಯ ಶಿಕ್ಷಕರನ್ನು ಸಿದ್ಧಗೊಳಿಸುವುದೂ ಮುಖ್ಯವಾದ ಕೆಲಸ ಎಂಬುದನ್ನು ಗಮನಿಸಲೇಬೇಕು.

# ಶಿವಮೊಗ್ಗದಲ್ಲಿ ರಂಗಾಯಣ ಆರಂಭವಾದ ಕೆಲ ವರ್ಷಗಳ ನಂತರ ಅದನ್ನು ಸಂಪೂರ್ಣವಾಗಿ ಮಕ್ಕಳ ರಂಗಭೂಮಿಗೆ ಸೀಮಿತಗೊಳಿಸಿ ವಿಭಿನ್ನ ಪ್ರಯೋಗಗಳನ್ನು ಶಾಲಾಹಂತದಲ್ಲಿ ಮಾಡಬೇಕೆಂಬ ಚರ್ಚೆಯಾಗಿ ಅಂತಿಮ ಹಂತಕ್ಕೆ ಬಂತು ಆದರೆ ಅದು ಏಕೆ ಮುಂದುವರೆಯಲಿಲ್ಲ ಎಂಬುದು ಈಗಲೂ ಬಿಡಿಸಲಾಗದ ಗಂಟಾಗಿ ಉಳಿದಿದೆ.

#ಶಿಕ್ಷಣದಲ್ಲಿ_ರಂಗಭೂಮಿಗೆ_ಒಂದು_ರೆಪರ್ಟರಿ

ಹೆಚ್ ಆಂಜನೇಯ ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದಾಗ ಸಾಣೆಹಳ್ಳಿಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಹಲವು ಸಭೆಗಳು ನಡೆದು ಈಗಾಗಲೇ ನಾಟಕ ಶಿಕ್ಷಕರಾಗಿರುವ ಶಿಕ್ಷಕರುಗಳ ಕೆಲಸಗಳನ್ನು ಗಮನಿಸಿ ಹಾಗೂ ಬೇರೆ ವಿಷಯ ಶಿಕ್ಷಕರು ರಂಗಭೂಮಿ ಚಟುವಟಿಕೆ ಬಳಸಿಕೊಂಡು ಮಾಡಿರುವ ಕೆಲಸಗಳನ್ನು ಗಮನಿಸಿ ಮೊರಾರ್ಜಿ ವಸತಿ ಶಾಲೆಗೆ ನಾಟಕ ಶಿಕ್ಷಕರನ್ನು ನೇಮಿಸುವುದು ಅಂತಿಮ ಹಂತಕ್ಕೆ ಬಂತು. ಆಗ ಹಿರಿಯ ರಂಗಕರ್ಮಿ ಪ್ರಸನ್ನ ಅವರು ನಾಟಕ ಶಾಲೆಗಳಿಂದ ಹೊರಬಂದವರಿಗೆ ಶಾಲೆ ಮತ್ತು ಮಕ್ಕಳ ರಂಗದ ಬಗ್ಗೆ ಹೆಚ್ಚು ತಿಳಿದಿರಲಾರದು ಹಾಗಾಗಿ ಶಿಕ್ಷಣದಲ್ಲಿ ರಂಗಭೂಮಿಗೆ ಸಂಬಂಧಿಸಿದ ಆರು ತಿಂಗಳ ಅಥವಾ ಒಂದು ವರ್ಷದ ಶಾಲೆ ಮಾಡುವ ಯೋಚನೆಯನ್ನು ಮುಂದಿಟ್ಟರು, ಸ್ವಾಮೀಜಿಯವರು ಸಾಣೆಹಳ್ಳಿಯಲ್ಲಿ ಆಗಲಿ ಅಂದರು. ನಂತರ ಇದು ಬೇರೆ ಬೇರೆ ತಿರುವುಗಳನ್ನು ಪಡೆಯಿತು. ನಂತರ ಈ ಚರ್ಚೆ ಮುಂದುವರೆದಂತೆ ಕಾಣಲಿಲ್ಲ ರಂಗ ಶಿಕ್ಷಕರ ನೇಮಕವು ಆಗಲಿಲ್ಲ ಆ ವಿಶೇಷ ಶಾಲೆಯ ವಿಚಾರವು ನೆನೆಗುದಿಗೆ ಬಿತ್ತು.

#  ರಾಜ್ಯದಲ್ಲಿ ನಡೆಯುತ್ತಿರುವ ಬಿಇಡಿ ಕಾಲೇಜುಗಳಲ್ಲಿ ಎರಡು ವರ್ಷದ ಶಿಕ್ಷಣವಿದು ಮೂರನೆಯ ಸೆಮಿಸ್ಟರ್ ನಲ್ಲಿ 50 ಅಂಕಗಳಿಗೆ ರಂಗಭೂಮಿಯೇ ಪ್ರಧಾನವಾದ ವಿಷಯವಿದೆ ಎಂಬುದು ಬಹಳಷ್ಟು ರಂಗ ತಜ್ಞರಿಗೆ ತಿಳಿದಿಲ್ಲ.. ತಿಳಿದಿರುವ ಕೆಲವರು ಅಲ್ಲಿರುವ ಪಠ್ಯ ವಸ್ತುವನ್ನು ನೋಡದೆ ಮೂರು ನಾಲ್ಕು ದಿನದ ತರಬೇತಿ ಮಾಡಿ ಒಂದು ಚಿಕ್ಕ ನಾಟಕ ಮಾಡಿಸಿ ಅಸೈನ್ಮೆಂಟ್ ಗಳನ್ನು ಬರೆಸಿ ಅಂಕಗಳನ್ನು ನೀಡಿದ್ದಿದೆ. ಅಥವಾ ಕರ್ನಾಟಕದ ಬೇರೆ ಬೇರೆ ನಾಟಕಶಾಲೆಗೆ ಒಂದುದಿನದ ಪ್ರವಾಸ ಹೋಗಿಬಂದು ಅಸೈನ್‌ಮೆಂಟ್ ಬರೆಸಿ ಅಂಕ ನೀಡಿರುವುದೂ ಇದೆ. ಇಲ್ಲಿಯೇ ವಿಷಯವನ್ನ ಗಂಭೀರವಾಗಿ ಪರಿಗಣಿಸಿ ಸರಿಯಾದ ಪಾಠ ಮಾಡಿ ತರಬೇತಿ ನೀಡಿದರೆ ಎಲ್ಲಾ ವಿಷಯ ಶಿಕ್ಷಕರು ರಂಗ ಶಿಕ್ಷಕರ ತರ ಕೆಲಸ ಮಾಡಬಹುದು
       ನಮ್ಮಲ್ಲಿ ಶಿಕ್ಷಕರ ಅನುಭವ ಬೇಕಿಲ್ಲ, ಶಾಲೆಯ ನೈಜ ಸಮಸ್ಯೆಯೂ ಬೇಕಿಲ್ಲ ಒಟ್ಟಲ್ಲಿ ಶಾಲೆಯಲ್ಲಿ ಮಕ್ಕಳ ಮೇಲೆ ಪ್ರಯೋಗಗಳು ನಡೆಯುತ್ತಿರಬೇಕು. ಒಬ್ಬೊಬ್ಬರದು ಒಂದೊಂದು.

#ಫೋಟೋಗಳು
೧ ಗಾಜನೂರಿನ ಮೊರಾರ್ಜಿ ವಸತಿಶಾಲೆಯ ಮಕ್ಕಳು ಬರೆದ ಕವನ ಸಂಕಲನ ಬಿಡುಗಡೆ ಸಮಾರಂಭ
೨ಸಾಣೇಹಳ್ಳಿಯಲ್ಲಿ ಆಂಜನೇಯ ಅವರು‌ಮಾತಾಡುತ್ತಿರುವುದು
#ಉಳಿದವು ನಮ ತಂಡ ಬೇರೆ ಬೇರೆ ಶಾಲೆಗಳಲ್ಲಿ ಶಿಕ್ಷಣದಲ್ಲಿ‌ ರಂಗಭೂಮಿ ಕೆಲಸ ಮಾಡುತ್ತಿರುವುದು(ಪ್ರಾತಿನಿಧಿಕವಾಗಿ ಮೂರು ಹಾಕಿರುವೆ)


ಸಾಸ್ವೆಹಳ್ಳಿ ಸತೀಶ
ಶಿವಮೊಗ್ಗ